ಮ್ಹ|| ಶ್ರೀ ರಾಮೇಶ್ವರ ಮತ್ತು ಅಮ್ಮನವರ ಹಾಗೂ ವಿಠ್ಠಲ ದೇವಸ್ಥಾನ ಶ್ರೀ ಕ್ಷೇತ್ರ ಇಟಗಿ

ದೇವಾಲಯದ ಬಗ್ಗೆ ಮಾಹಿತಿ

ವೈದಿಕ ಸಂಸ್ಕ್ರತಿಯ ಬೆಳವಣಿಗೆಯಲ್ಲಿ ದೇವಾಲಯಗಳಿಗೆ ಅಪ್ರಥಿಮವಾದ ಮಹತ್ವವು ದೊರಕಿದೆ.ಧಾರ್ಮಿಕ ಹಾಗೂ ಆಧ್ಯಾತ್ಮಿಕ ಶಕ್ತಿ ಕೇಂದ್ರಗಳಾಗಿ, ಸಮಾಜ ವ್ಯವಸ್ಥೆಯ ನ್ಯಾಯ ಸಮ್ಮತ ಆರೋಗ್ಯದ ತಾಣಗಳಾಗಿ ದೇವಾಲಯಗಳು ಕ್ರಿಯಾಮುಖಿಯಾಗಿರುವ ಉದಾಹರಣೆಗಳು  ಇವೆ.ಇದರಲ್ಲಿ ಇಷ್ಟಿಕಾಪುರಲದಲ್ಲಿ ನೆಲೆಸಿರುವಂತಹ ಶ್ರಿ ರಾಮೇಶ್ವರನ ದೇವಾಲಯವೂ ಒಂದು.

ಉತ್ತರಕನ್ನಡ ಜಿಲ್ಲೆಯ,ಸಿದ್ದಾಪುರ ತಾಲ್ಲೂಕಿನ ಶ್ರೀ ಕ್ಷೇತ್ರ ಇಟಗಿಯಲ್ಲಿ ನೆಲೆಸಿರುವಂತಹ ಶ್ರೀ ರಾಮೇಶ್ವರನ ಇತಿಹಾಸವು ಬಹಳ ಪುರಾತನವಾದದ್ದು.

ಹಿಂದೆ ಈ ಕ್ಷೇತ್ರವು,ಇಷ್ಟಿಕಾಪುರ/ಗಂಗಾಪುರ ಎಂಬ ನಾಮದಿಂದ ಕರೆಯಲ್ಪಡುತ್ತಿತ್ತು ಎಂಬ ಉಲ್ಲೇಖವಿದೆ.

ಈ ಹೆಸರು ಯಜ್ಞಾರ್ಥಕವಾಗಿದ್ದು,ಇಲ್ಲಿ ಹಲವು ಶ್ರೌತ್ರ ಯಾಗಗಳು ಯಜ್ಞಗಳು ನಡೆದಿರುವುದರಿಂದ ಇದಕ್ಕೆ ಇಷ್ಟಿಕಾಪುರ ಎಂಬ ಹೆಸರು ಬಂದಿದೆ.ಕ್ರಿ.ಶ.ಸು.೬ ನೇ ಶತಮಾನದ ಬೃಹತ್ ಸಂಹಿತೆಯಲ್ಲಿ ಇಷ್ಟಿಕಾ ಎಂಬ ಹೆಸರನ್ನೂ ಹೇಳಿದ್ದಾರೆ

ದಕ್ಷಿಣಾಭಿಮುಖವಾಗಿ ಸೀತಾನ್ವೇಷಣೆಯನ್ನು ಮಾಡುತ್ತ ಹೊರಟ ಪ್ರಭು ಶ್ರೀರಾಮನು ತನ್ನ ಪ್ರದೋಷ ಪೂಜೆಗೆಂದು ಸ್ಥಾಪಿಸಿರುವ ಮೂರ್ತಿ ಇದಾಗಿದ್ದು, ಶ್ರೀರಾಮನಿಂದ ಸ್ಥಾಪಿಸಲ್ಪಟ್ಟ ಈ ಲಿಂಗವು ಶ್ರೀರಾಮೇಶ್ವರ ಎಂಬ ಅಭಿನಾಮವನ್ನು ಪಡೆಯಿತು.

ಮುಂದೊಂದು ದಿನ, ರಾಮಯ್ಯ ಹೆಗಡೆ ಎಂಬುವವರು ತಮ್ಮ ಮನೆಯಲ್ಲಿನ ಹಾಲು ಕೊಡಲು ಯೋಗ್ಯವಾದ ಹಸುವು ಹಾಲು ಕೊಡದೇ ಇರಲು ಕಾರಣವನ್ನು  ಹುಡುಕುತ್ತಾ ಈ ಸ್ಥಳಕ್ಕೆ ಬಂದಾಗ, ತಮ್ಮ ಮನೆಯ ಹಸುವು ಹುತ್ತದ ಮೇಲೆ ಹಾಲು ಸುರಿಸುವುದನ್ನು  ಕಂಡು ಆಶ್ಚರ್ಯಚಕಿತರಾಗಿ ಅದನ್ನು ಅನ್ವೇಶಿಸಲು ಹೊರಟಾಗ ಅಪ್ರತಿಮ ದಿವ್ಯ ಲಿಂಗದ ದರ್ಶನವಾಯಿತು.

ಈ ದೈವೀವಿಶೆಷವನ್ನ ಕಂಡು ಪುಲಕಿತರಾದ ಹೆಗಡೆಯವರು ಪುರೋಹಿತರೊಂದಿಗೆ ಅವಲೋಕಿಸಿ,ಅದೇ ಸ್ಥಳದಲ್ಲಿ ಗುಡಿಯನ್ನು ನಿರ್ಮಿಸಿ ಶಾಸ್ತ್ರೀಯವಾಗಿ ಆ ಲಿಂಗವನ್ನು ಶ್ರೀ ರಾಮೇಶ್ವರ ಎಂಬ ಹೆಸರಲ್ಲಿಯೇ ಪ್ರತಿಷ್ಠಾಪಿಸಿದರು.

ಐಸೂರು ಮೂಲ ಸಂಸ್ಥಾನದ ಬಿಳಗಿಯ ಪ್ರಸಿದ್ಧ ದೊರೆ ಘಂಟೇಂದ್ರನ ಮಗ ತಿಮ್ಮರಸನ ಹೆಸರಿನಲ್ಲಿ ಶ್ರೀ ರಾಮೇಶ್ವರ ದೇವರಿಗೆ ಸದಾಸೇವೆಯು ನಡೆಯುವ ವ್ಯವಸ್ಥೆ ಇದೆ.ನವರಂಗದ ದ್ವಾರದ ಸಮ್ಮುಖದಲ್ಲಿ ಹಾಸುಗಲ್ಲೊಂದರ‌ ಮೇಲೆ ನಮಸ್ಕಾರ ಭಂಗಿಯಲ್ಲಿರುವ ಭಕ್ತನ ರೇಖಾಚಿತ್ರವಿದ್ದು,ಅದರ ಪಕ್ಕದಲ್ಲಿ ‘ಘಂಟಪ್ಪ ನಾಯಕ ತಿಮ್ಮರಸ ಸದಾಸೇವೆ’ ಎಂದು ಶುದ್ಧಕನ್ನಡ ಲಿಪಿಯಲ್ಲಿ ಬರಹವಿದೆ‌.

ಕ್ರಿ.ಶ.ಸ.ಸು.1492 ರಲ್ಲಿ ವಿಜಯನಗರದ ಶ್ರೀ ಕೃಷ್ಣದೆವರಾಯರ ಸಾಂಮಂತರಾಗಿ ಆಳ್ವಿಕೆ ನಡೆಸುತ್ತಿದ್ದ ಬಿಳಗಿಯ ಘಂಟಪ್ಪನಾಯಕರ ಹಿರಿಯ ಮಗ ತಿಮ್ಮರಸನ ಅಕಾಲಿಕ ಅಲ್ಪಾಯುಷ್ಯ ಮರಣದಿಂದ ಉತ್ತರಾಧಿಕಾರಿಯಾಗಿ ನೇಮಕಗೊಂಡ ಧಾರ್ಮಿಕ ಚಿಂತಕನಾದ ನರಸಿಂಹ ರಾಜನು ತನ್ನ ಅಣ್ಣನ ಸ್ಮರಣೆಯಲ್ಲಿ ಈ ಕ್ಷೇತ್ರದಲ್ಲಿ ಶಿಲಾಮಯ ದೇವಾಲಯವನ್ನು ನಿರ್ಮಿಸಿ,ಆಲಯದ ನಂದಿಮಂಟಪದ ಬಲಭಾಗದಲ್ಲಿ ಮಹಾಗಣಪತಿಯನ್ನು ಎಡಭಾಗದಲ್ಲಿ ವೀರಭದ್ರನನ್ನು ಕೆತ್ತಿಸಿ,ಉತ್ತರಕ್ಕೆ ತಾಯಿ ಪಾರ್ವತಿಯ ಮಂದಿರವನ್ನು ಮತ್ತು ಹಿಂಭಾಗದಲ್ಲಿ ಮೂಲ ಪುರುಷ ವಿಟ್ಠಲನ ದೇವಾಲಯನ್ನು ನಿರ್ಮಿಸಿದನು.

 ಶ್ರೀ ದೇವರಿಗೆ ನಿತ್ಯಸೇವೆಗಾಗಿ ಭೂಮಿಯನ್ನು ದಾನ ಮಾಡಿ ಶ್ರೀ ದೇವರ ಅಂಗರಂಗಾದಿ ಭೋಗಗಳಿಗೆ ಯಾವ ಕೊರತೆಯೂ ಆಗದಂತೆ ಕೊಡುಗೆಯನ್ನಿತ್ತನು.

ಹದಿನಾಲ್ಕನೆ ಶತಾಬ್ದದ ಮಧ್ಯ ಭಾಗದಲ್ಲಿ,ಈ ಆಲಯವು ವ್ಯವಸ್ಥಿತ ಕ್ಷೇತ್ರದ ರೂಪವನ್ನು ಪಡೆದು ಅಗಸ್ತ್ಯ ಪರಂಪರೆಯ ವಾತುಲಾಗಮ ಅನುಸಾರ ಆಗಮ ಶಾಸ್ತ್ರದ ವಿಧಿ ವಿಧಾನಗಳು ಅನ್ವಯವಾಗಿ ರಥೋತ್ಸವವು ನಡೆಯಲಾರಂಭವಾಯಿತು.ನಿತ್ಯಪೂಜೆ ತ್ರಿಕಾಲ ಬಲಿ ಉತ್ಸವ ವಿಶೇಷಾದಿಗಳು ಅಂದಿನಿಂದ ಪ್ರಾರಂಭವಾಗಿ ಇಂದಿಗೂ ನಡೆದುಕೊಂಡು ಬಂದಿರುವುದು ಅವಿಚ್ಛಿನ್ನವಾಗಿದೆ ಎಂದು ತಿಳಿಸುತ್ತದೆ.

ದೇವಳವು ಗರ್ಭ ಪ್ರದಕ್ಷಿಣಪಥ ಅಂತರಾಳ ಹಾಗೂ ನವರಂಗಗಳನ್ನು ಒಳಗೊಂಡಿದೆ.ಸುಂದರವಾದ ಕದಂಬನಾಗರ ಶಿಖರ ಶುಖನಾಸಗಳಿಂದ ಶೋಭಿಸುತ್ತದೆ.ಶುಖನಾಸದ ಮುಖಫಲಕದ ಮೇಲೆ ಪರಶುರಾಮನ ಉಬ್ಬು ಶಿಲ್ಪವನ್ನು ಕಂಡರಿಸಲಾಗಿದೆ.ಕಪೋತಕಲ್ಲಿನ ಚಾವಣಿಗಳು ಕಲ್ಲಿನ‌ ನೆಲಹಾಸುಗಳಿರುವ ದೇವಾಲಯವು,ಉತ್ತರ ಪೂರ್ವ ಮತ್ತು ದಕ್ಷಿಣ ದಿಕ್ಕುಗಳಲ್ಲಿ ಅರ್ಧ ಭಿತ್ತಿಯ ನಿರ್ಮಾಣವಾಗಿದೆ.ದ್ವಾರದ ಎಡಬಲದಲ್ಲಿ ದ್ವಾರಪಾಲಕರ ತ್ರಿಭಂಗ ಶಿಲ್ಪವಿದೆ.ಲಲಾಟದ ಅಡಿಭಾಗ ಅಗ್ರಭಾಗಗಳು ಕಮಲಪುಷ್ಪದ ಕೆತ್ತನೆಗಳನ್ನು ಹೊಂದಿದೆ.ಮೇಲಿನ ಭಿತ್ತಿ ಭಾಗಗಳಲ್ಲಿ ಗಜಲಕ್ಷ್ಮಿ ನೃತ್ಯಮುನಿ ಪೀಠಾಸೀನ ಯೋಗಿಯ ಚಿತ್ರಣವಿದೆ.ವೀರಭದ್ರನ ಕೈಗಳಲ್ಲಿ ಖಡ್ಗ-ಬಾಣ-ಧನಸ್ಸು ಮುಂಡಗಳನ್ನು ಧರಿಸಿ ರುಂಡಮಾಲೆ,ಕಟಿಬಂಧ,ಕಂಠಹಾರ ಅಂಗದ,ಕಂಕಣ,ಕಾಲಿನ ಕಡಗ ಇತ್ಯಾದಿಗಳಿಂದ ಶೋಭಿಸುವ ಮೂರ್ತಿಯ ಕಿರೀಟವು ಶಿವಲಿಂಗಯುಕ್ತವಾದ ಸುಂದರ ದಿವ್ಯಮೂರ್ತಿಯಾಗಿದೆ.ಭಿತ್ತಿಯಮೇಲೆ ಕನ್ನಡ ಲಿಪಿಯ ಬರಹವು ಕಂಡು ಬರುತ್ತದೆ.ದೇವಸ್ಥಾನದ ಆವಾರದಲ್ಲಿ ಅನೇಕ ಭಂಗಿಯ ಶಿಲ್ಪಕಲಾ ಕೆತ್ತನೆಗಳನ್ನು ಕಾಣಬಹುದು.ದೇವಸ್ಥಾನದ ಎದುರಿನಲ್ಲಿ ಶಿಲಾಮಯ ಮಹಾದ್ವಾರವು ನಿರ್ಮಿತವಾಗಿದ್ದು ,ಮುಂಭಾಗದಲ್ಲಿ ಸುಂದರ ಕಲ್ಯಾಣಿಯನ್ನೂ ನಿರ್ಮಿಸಲಾಗಿದೆ.

ಎಲ್ಲ ರೀತಿಯ ಹಿಂದೂ ಧಾರ್ಮಿಕ ಹಬ್ಬ ಹರಿದಿನಗಳು,ಪರ್ವದಿನಗಳು,ಉತ್ಸವದೊಂದಿಗೆ ವಿಶೇಷವಾಗಿ ನಡೆಯುವುದನ್ನು ಕಣ್ತುಂಬಿಕೊಳ್ಳಬಹುದು.

ಇಂತಹ ಪೌರಾಣಿಕ ಮತ್ತು ಐತಿಹಾಸಿಕ ಹಿನ್ನೆಲೆ ಇರುವ ಪ್ರೇಕ್ಷಣೀಯ ಸ್ಥಳವಾದ ಸಶಾಸ್ತ್ರೀಯ ಆಗಮೋಕ್ತ ಧಾರ್ಮಿಕ ಕ್ಷೇತ್ರ ಇದಾಗಿದೆ.ಇದಲ್ಲದೇ ಪ್ರಧಾನ ದೇವರೊಂದಿಗೆ ಹಲವು ದೇವತೆಗಳ ಸಾನಿಧ್ಯವನ್ನು ಒಂದೇ ಕ್ಷೇತ್ರದಲ್ಲಿ ಕಾಣಬಹುದಾಗಿದೆ.ಕಾರಣಿಕ ಕ್ಷೇತ್ರವಾದ ಇದು ಭಕ್ತರ ಹಲವು ಸಂಕಷ್ಟಗಳನ್ನು ಪರಿಹರಿಸುವ ಮಹಾಕ್ಷೇತ್ರವಾಗಿದೆ.

(ಈ ಮೇಲಿನ ಇತಿಹಾಸ ಮಾಹಿತಿಯನ್ನು ಶ್ರೀ ಅತ್ತಿಮುರುಡು ವಿಶ್ವೇಶ್ವರ ಅವರ ಇಟಗಿಯ ಇತಿವೃತ್ತ ಪುಸ್ತಕದಿಂದ ಪಡೆಯಲಾಗಿದೆ.
ಸಂಪೂರ್ಣ ಮಾಹಿತಿ ಇರುವ ಈ ಪುಸ್ತಕವನ್ನು ದೇವಸ್ಥಾನದ ಕಾರ್ಯಾಲಯದಲ್ಲಿ ಖರೀದಿಸಬಹದು.
ಸಂಕ್ಷಿಪ್ತವಾಗಿ ಸಂಪಾದಿಸಿದವರು: ಶ್ರೀ ಅನಂತ ಭಟ್ಟ ಇಟಗಿ,ಶ್ರೀ ದೇವಸ್ಥಾನದ ಪ್ರಧಾನ ತಾಂತ್ರಿಕರು)

ದೇವಸ್ಥಾನ ಸಮಯ (Temple Timings) :
6:30 AM -1PM
3:30PM – 8PM
(ಹಬ್ಬ ಮತ್ತು ವಿಶೇಷ ಪೂಜೆಯ ದಿನ ಸಮಯದಲ್ಲಿ ಬದಲಾವಣೆ ಆಗುತ್ತದೆ.)

ಪ್ರತಿ ದಿನದ ಬಲಿ ಉತ್ಸವಪೂಜಾ ಸಮಯ:
7:30 AM
12:15 PM
7:00 PM

(ನಿತ್ಯ ಬಲಿ ಉತ್ಸವ ಪೂಜೆಯ ನಂತರ ಯಾವುದೇ ವಯಕ್ತಿಕ ಪೂಜೆಗೆ ಅವಕಾಶ ಇರುವುದಿಲ್ಲ.)

 

Scroll to Top