ತ್ರಿಕಾಲ ಬಲಿ ಉತ್ಸವ ನಡೆಯುವ ಶ್ರೀ ಕ್ಷೇತ್ರ ಇಟಗಿಯು ನಮ್ಮ ಜಿಲ್ಲೆಯ ಹೆಮ್ಮೆಯ ಕ್ಷೇತ್ರವಾಗಿದೆ. ಇಲ್ಲಿನ ಇತಿಹಾಸ ಮತ್ತು ಧಾರ್ಮಿಕ ಆಚರಣೆಗಳು ಬಹಳ ಮಹತ್ವದ್ದಾಗಿದೆ, ಎಂದು ಕೆನರಾ ಲೋಕಸಭಾ ಕ್ಷೇತ್ರದ ಸಂಸದರಾದ ವಿಶ್ವೇಶ್ವರ ಹೆಗಡೆ ಕಾಗೇರಿಯವರು ಹೇಳಿದರು.
ಶ್ರೀಯುತರು ಎಪ್ರಿಲ್ 5 ರಂದು ಸಿದ್ದಾಪುರ ತಾಲ್ಲೂಕಿನ ಬಿಳಗಿ ಸೀಮೆಯ ಶ್ರೀಕ್ಷೇತ್ರ ಇಟಗಿಯಲ್ಲಿ ನಡೆಯುತ್ತಿರುವ ದಿವ್ಯಾಷ್ಟಬಂಧ ಮಹೋತ್ಸವದಲ್ಲಿ ಪಾಲ್ಗೊಂಡು ಶ್ರೀ ರಾಮೇಶ್ವರ ಮತ್ತು ಅಮ್ಮನವರ ದರ್ಶನ ಮಾಡಿಕೊಂಡು,ಸ್ವಾತಂತ್ರ್ಯ ಸಂಗ್ರಾಮದಲ್ಲಿ ಶ್ರೀ ದೇವಸ್ಥಾನದ ಪಾತ್ರ ಎನ್ನುವ ಶಿಲಾಫಲಕದ ಅನಾವರಣ ಮಾಡಿದರು.
ಭಾರತದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಈ ದಿವ್ಯ ಕ್ಷೇತ್ರವು ಸ್ವತಂತ್ರ ಹೋರಾಟಗಾರರಿಗೆ ಕೇಂದ್ರ ಸ್ಥಾನವನ್ನು ನೀಡಿ,ಅವರ ಹೋರಾಟಕ್ಕೆ ಸಹಾಯ ಹಸ್ತವನ್ನು ನೀಡಿತ್ತು.ಈ ಕಾರಣದಿಂದಾಗಿ ಇಟಗಿ ಅಷ್ಟಬಂಧದ ಶುಭ ಸಂದರ್ಭದಲ್ಲಿ ,ಮೋಕ್ತೇಸರ ಮಂಡಳಿ ಮತ್ತು ಇಟಗಿ ಗ್ರಾಮ ಸ್ವಾತಂತ್ರ್ಯ ಹೋರಾಟಗಾರರ ಸಂಸ್ಮರಣಾ ಸಮೀತಿಯವರು ರೂಪಿಸಿದ ಶಿಲಾಫಲಕವನ್ನು ಸಂಸದರ ಉಪಸ್ಥಿತಿಯಲ್ಲಿ ಅನಾವರಣ ಗೊಂಡಿತು.
ಅನಾವರಣ ಗೊಳಿಸಿ ಮಾತನಾಡಿದ ಸಂಸದರು,
“ನಮ್ಮ ಸಿದ್ದಾಪುರ ತಾಲ್ಲೂಕು ಸ್ವಾತಂತ್ರ್ಯ ಹೋರಾಟದಲ್ಲಿ ಬಹಳ ವಿಶೇಷ ಸ್ಥಾನವನ್ನು ಪಡೆದಿದೆ.ಸಾವಿರಕ್ಕೂ ಅಧಿಕ ಸ್ವಾತಂತ್ರ್ಯ ಹೋರಾಟಗಾರರು ನಮ್ಮ ಸಿದ್ದಾಪುರದಲ್ಲಿ ಇದ್ದರು ಎನ್ನುವುದು ನಮಗೆ ಹೆಮ್ಮೆಯ ವಿಷಯ.ಶ್ರೀಮಾನ್ಯ ಪ್ರಧಾನಮಂತ್ರಿಗಳಾದ ನರೇಂದ್ರ ಮೋದಿಯವರು ಸಿದ್ದಾಪುರದ ಸ್ವಾತಂತ್ರ್ಯ ಹೋರಾಟದ ಇತಿಹಾಸವನ್ನು ಕೇಳಿ ಬಹಳ ಸಂತಸಪಟ್ಟರು. ಸ್ವಾತಂತ್ರ್ಯ ಹೋರಾಟದಲ್ಲಿ ಈ ತರಹದ ದೇವಸ್ಥಾನಗಳಿಂದ ದೊಡ್ಡ ಮಟ್ಟದ ಸಹಾಯ ದೊರಕಿದೆ.ಅದರಲ್ಲೂ ಇಟಗಿ ಕ್ಷೇತ್ರದಂತಹ ಸ್ಥಳಗಳು ಪ್ರತಿ ಹಂತದಲ್ಲೂ ಒಂದಲ್ಲ ಒಂದು ರೀತಿಯ ಸಹಾಯ-ಸಹಕಾರವನ್ನು ಒದಗಿಸಿದೆ.ಹಾಗಾಗಿ ಇವತ್ತು ಮಾಡಿದ ಅನವಾರಣ ಕಾರ್ಯಕ್ರಮ ಬಹಳ ಸ್ಮರಣೀಯವಾದಂತಹದು.”ಇದೇ ಸಂದರ್ಭದಲ್ಲಿ ಇಟಗಿಯ ದಿವ್ಯಾಷ್ಟಬಂಧ ಮಹೋತ್ಸವದ ಕುರಿತು ಮಾತನಾಡಿದ ಅವರು,
“ಶ್ರೀ ರಾಮಚಂದ್ರಪುರಮಠದ ಹಿಂದಿನ ಗುರುಗಳಿಂದ ನಡೆದಿದ್ದ ಅಷ್ಟಬಂಧ ಮಹೋತ್ಸವವು 59 ವರ್ಷದ ನಂತರ ನಡೆದಿರುವುದು ಇಡೀ ಸೀಮೆಗೆ ವಿಶೇಷವಾದಂಹದು.
ಸನಾತನ ಹಿಂದೂ ಧರ್ಮದ ಸಂಸ್ಕೃತಿಯನ್ನು ಉಳಿಸಲು ಇವೆಲ್ಲವೂ ಬಹಳ ಮುಖ್ಯ.ಇಟಗಿಯ ಈ ಕ್ಷೇತ್ರದಲ್ಲಿ ನಡೆಯುವ ತ್ರಿಕಾಲ ಬಲಿ ಉತ್ಸವವು ನೋಡಲು ಸಿಗುವುದು ವಿರಳಾತಿವಿರಳ ಮತ್ತು ನಮ್ಮೆಲ್ಲರಿಗೂ ಹೆಮ್ಮೆಯ ವಿಷಯ.
ಇಂದಿನ ತಲೆಮಾರಿನ ತಾವೆಲ್ಲರೂ ಸೇರಿಕೊಂಡು ಇಷ್ಟು ದೊಡ್ಡ ಕಾರ್ಯಕ್ರಮದ ಸಂಕಲ್ಪ ಮಾಡಿ ನಡೆಸಿಕೊಂಡು ಹೋಗ್ತಾ ಇರುವುದಕ್ಕೆ ನನ್ನ ವಂದನೆಗಳು.ಮತ್ತು ಇಂತಹ ಮಹತ್ಕಾರ್ಯವನ್ನು ನೋಡಿದ ನಮ್ಮೆಲ್ಲರ ಜೀವನ ಸಾರ್ಥಕ ಎಂದು ಭಾವಿಸುತ್ತೇನೆ.ಸ್ವರಾಜ್ಯದ ಏಳಿಗೆಯಲ್ಲಿ ಇಟಗಿಯಂತಹ ಕ್ಷೇತ್ರಗಳು ಕೇಂದ್ರ ಬಿಂದು ಆಗಲಿದೆ.” ಎಂದರು.
ಅಷ್ಟಬಂಧ ಮಹೋತ್ಸವದ ಅಧ್ಯಕ್ಷರಾದ ಶಶಿಭೂಷಣ ಹೆಗಡೆಯವರು ಸ್ವಾಗತಕೋರಿದರು. ಈ ಸಂದರ್ಭದಲ್ಲಿ ಇಟಗಿಯ ಮೋಕ್ತೇಸರ ಮಂಡಳಿಯ ಅಧ್ಯಕ್ಷರಾದ ಚಂದ್ರಶೇಖರ ಹೆಗಡೆ ,ಹಿರಿಯ ನ್ಯಾಯಾಧೀಶರಾದ ಜೆ.ಪಿ.ಎನ್ ಹೆಗಡೆ ಹರಗಿ,ನಾರಾಯಣಮೂರ್ತಿ ಹೆಗಡೆ ಹರಗಿ ,ಜಿ.ಬಿ.ಹೆಗಡೆ,ಬಿ.ಜೆ.ಪಿ ಸಿದ್ದಾಪುರದ ತಾಲ್ಲೂಕಾಧ್ಯಕ್ಷ ತಿಮ್ಮಪ್ಪ ನಾಯ್ಕ ಮತ್ತಿತರರು ಭಾಗಿಯಾಗಿದ್ದರು.











