ದಿನಾಂಕ:27/04/2025 ಭಾನುವಾರ ಶ್ರೀ ಕ್ಷೇತ್ರ ಇಟಗಿಯಲ್ಲಿ ದಿವ್ಯಾಷ್ಟಬಂಧ ಮಹೋತ್ಸವದ ಅಭಿವಂದನಾ ಸಭೆಯನ್ನು ಏರ್ಪಡಿಸಲಾಗಿತ್ತು.
ಶಂಖನಾದದೊಂದಿಗೆ ಕಾರ್ಯಕ್ರಮವನ್ನು ಪ್ರಾರಂಭಿಸಲಾಯಿತು.
ನಾರಾಯಣಮೂರ್ತಿ ಹೆಗಡೆ ಹರಗಿ ಅವರು
ಆಗಮಿಸಿದ ಸರ್ವರಿಗೂ ಸ್ವಾಗತವನ್ನು ಕೋರಿದರು.
ಆಡಳಿತ ಮೊಕ್ತೇಸರರಾದ ಚಂದ್ರಶೇಖರ ಹೆಗಡೆಯವರು,
“ನಮ್ಮ ಇಟಗಿಯ ಅಷ್ಟಬಂಧ ಮಹೋತ್ಸವವು ನ ಭೂತೋ ನಭವಿಷ್ಯತಿ ಎನ್ನುವ ಮಾತಿನಂತೇ ಇತಿಹಾಸ ಸೃಷ್ಟಿಸುವಂತಾಗಿದೆ.ಪ್ರತಿ ಹಂತದಲ್ಲೂ ಶ್ರೀ ರಾಮೇಶ್ವರನು ಪ್ರಸಾದವನ್ನು ಅನುಗ್ರಹಿಸಿ ಕಾರ್ಯಕ್ರಮದ ಯಶಸ್ಸಿನ ಸಂದೇಶವನ್ನು ನಮಗೆ ನೀಡಿದ್ದಾನೆ” ಎಂದು ಭಾವುಕರಾಗಿ ತಮ್ಮ ಪ್ರಾಸ್ತಾವಿಕ ನುಡಿಯನ್ನು ಪ್ರಸ್ತಾಪಿಸಿದರು.
ಅಷ್ಟಬಂಧ ಸಮಿತಿಯ ಕಾರ್ಯದರ್ಶಿಯಾದ ವಿನಾಯಕ ಹೆಗಡೆ ಹೊನ್ನೆಮಡಿಕೆ ಈ ಅಷ್ಟಬಂಧ ಮಹೋತ್ಸವದ ಜಮಾ-ಖರ್ಚು ವಿವರಣೆಯನ್ನು ನೀಡಿದರು.
ನಂತರದಲ್ಲಿ ಕೋಶಾಧ್ಯಕ್ಷರಾದ ಜಿ.ಎಸ್. ಹೆಗಡೆ ಬೆಳ್ಳೆಮಡಿಕೆ ಮಾತನಾಡಿ,”ಶ್ರೀ ರಾಮೇಶ್ವರ ನಮಗೆ ಮೊದಲು ಪರೀಕ್ಷೆಯನ್ನು ಒಡ್ಡಿ ಅದರಲ್ಲಿ ನಾವು ತೇರ್ಗಡೆ ಹೊಂದಿದರೆ ಮಾತ್ರ ಅದರ ಸಂಪೂರ್ಣ ಜವಾಬ್ದಾರಿಯನ್ನು ನೀಡುತ್ತಾನೆ.ಇಷ್ಟು ದೊಡ್ಡ ಕಾರ್ಯಕ್ರಮ ಯಾವುದೇ ಜಾತಿ-ಮತ-ಧರ್ಮ ಎಂಬ ಬೇಧ-ಭಾವ ಇಲ್ಲದೇ ಒಟ್ಟಾಗಿ ನಿಂತು ಯಶಸ್ವಿಯಾದ ಕಾರ್ಯಕ್ರಮ ನಡೆಸಲು ಶ್ರೀ ರಾಮೇಶ್ವರನ ಆಶೀರ್ವಾದವೇ ಕಾರಣ”ಎಂದರು.
ಗಜಾನನ ಹೆಗಡೆ ಮಟ್ಟೇಮನೆ ಮಾತನಾಡಿ,”12 ದಿನಗಳ ಕಾಲ ಅತ್ಯದ್ಭುತವಾಗಿ ನಡೆದ ಕಾರ್ಯಕ್ರಮ ಪ್ರತಿ ಒಬ್ಬರ ಮನಸ್ಸಿಗೂ ಸಂತಸ ತಂದಿದೆ. ಹಾಗಾಗಿ ಈ ಕಾರ್ಯಕ್ರಮದ ಯಶಸ್ಸಿನ ಬಗ್ಗೆ ಎಲ್ಲ ಭಕ್ತರೂ ಸಂತೋಷಧಾಯಕ ಪ್ರತಿಕ್ರಿಯೆಯನ್ನು ನೀಡುತ್ತಿದ್ದಾರೆ” ಎಂದರು.
ಅದೇ ರೀತಿ ರಾಘವೇಂದ್ರ ಭಟ್ಟ ಎನ್ನುವವರು ಮಾತನಾಡಿ, “ಈ ಅಷ್ಟಬಂಧ ಮಹೋತ್ಸವವು ನಮ್ಮೆಲ್ಲರ ಪಾಲಿಗೆ ಇಷ್ಟಬಂಧವಾಗಲಿ” ಎಂದು ಸಮಸ್ತ ಭಕ್ತರ ಪರವಾಗಿ ಅನಿಸಿಕೆ ಸಲ್ಲಿಸಿದರು.
ಧಾರ್ಮಿಕ ಕಾರ್ಯಕ್ರಮದ ಮುಖ್ಯಸ್ಥರಾದ ರಾಮಚಂದ್ರ ಭಟ್ಟ ಕಲ್ಲಾಳರವರು,
” ಈ ಕಾರ್ಯಕ್ರಮದ ವೈಭೋಗ ನೋಡಿ ನಾನೂ ಕೂಡ ಭಾವಪರವಶನಾದೆ. ಈ ಮಹತ್ವದ ಕಾರ್ಯಕ್ಕೆ ಅನೇಕ ಕಾರ್ಯಕರ್ತರು ಹಲವಾರು ತಿಂಗಳುಗಳಿಂದ ಶ್ರಮಿಸಿದ್ದಾರೆ. ಅವರಿಗೆ ಮತ್ತು ಇಡೀ ಬಿಳಗಿ ಸೀಮೆಗೆ ನಮ್ಮ ಕೃತಜ್ಞತೆ ಸಲ್ಲಿಸುತ್ತೇವೆ.”ಎಂದರು.
ನಂತರದಲ್ಲಿ ಅಷ್ಟಬಂಧ ಮಹೋತ್ಸವದ ಅಧ್ಯಕ್ಷರಾಗಿದ್ದ ಡಾ.ಶಶಿಭೂಷಣ್ ಹೆಗಡೆ ಸರ್ವರಿಗೂ ಕೃತಜ್ಞತೆಯನ್ನು ಸಲ್ಲಿಸಿ ಮಾತನಾಡಿದರು.
“ನಮ್ಮ ತಾಲ್ಲೂಕಿನಲ್ಲಿ ಈ ರೀತಿಯ ಮಹತ್ವದ ಕಾರ್ಯಕ್ರಮ ನಡೆದಿರುವುದು ಮತ್ತು ನಾವು ಇದರ ಭಾಗವಾಗಿರುವುದು ನಮ್ಮ ಹೆಮ್ಮೆ. ಈ ಕಾರ್ಯಕ್ರಮ ಎಷ್ಟು ಚೆನ್ನಾಗಿ ಆಯ್ತು ಎಂದರೆ ಇನ್ನೂ ಚೆನ್ನಾಗಿ ಆಗಬಹುದಿತ್ತು ಎಂದು ಹೇಳಿದವರನ್ನು ನಾನಂತೂ ಕಾಣಲಿಲ್ಲ.”
“ಈ ಮಹತ್ವದ ಕಾರ್ಯಕ್ರಮದಿಂದ ರಾಮೇಶ್ವರ ಸಂಪ್ರೀತನಾಗಿದ್ದಾನೆ ಎಂದು ಶ್ರೀಗಳವರೇ ತಮ್ಮ ನುಡಿಗಳನ್ನು ವ್ಯಕ್ತಪಡಿಸಿದ್ದಾರೆ.”
“12 ದಿನಗಳ ಕಾಲ ಬೆಳಿಗ್ಗೆಯಿಂದ ಸಂಜೆಯ ವರೆಗೂ ಊಟ-ತಿಂಡಿ ನಡೆದಿರುವುದು ಬಹಳ ಸಂತಸದ ಸಂಗತಿ.ಅಡುಗೆ ತಯಾರಕರು ನಮಗೆ ಕೇವಲ ಅನ್ನವನ್ನ ಬಡಿಸಲಿಲ್ಲ ಅಮೃತವನ್ನೇ ಬಡಿಸಿದ್ದಾರೆ.
ಸುತ್ತಮುತ್ತಲಿನ ಜನರು ಪುರಶೃಂಗಾರ ಮಾಡಿ ಅಲಂಕರಿಸಿದ ರೀತಿ ಒಂದು ಅದ್ಭುತವೇ ಸರಿ.
ಅಂತೆಯೇ ಪ್ರತಿ ವಿಭಾಗದ ಸೇವೆಯಂತೂ ಅವಿಸ್ಮರಣೀಯ.
ಇಡೀ ಸೀಮೆಯ ಜನರು ಆರ್ಥಿಕವಾಗಿ ಸ್ವಲ್ಪ ಸಂಕಷ್ಟದಲ್ಲಿದ್ದರೂ ಈ ಮಟ್ಟದ ಹಣ ಕ್ರೋಢಿಕರಣವಾಗಿರುವುದು ಆಶ್ಚರ್ಯದ ಸಂಗತಿ ಎಂದರೆ ತಪ್ಪಾಗಲಾರದು.
ಸೀಮೆಯ ಜನ ಬೆವರು ಕೇಳಿದ್ದಕ್ಕೆ ರಕ್ತ ನೀಡಿ ಕಾರ್ಯಕ್ರಮವನ್ನು ಎತ್ತಿ ಹಿಡಿದಿದ್ದಾರೆ.
“ಈ ಮಹತ್ತರ ಕಾರ್ಯಕ್ರಮದಲ್ಲಿ ಉಳಿತಾಯವಾದ ಹಣವನ್ನು ವಿಶೇಷ ಯೋಜನೆಯೊಂದಕ್ಕೆ ಸೀಮಿತವಾಗಿ ಇಡುತ್ತೇವೆ.
ಶ್ರೀ ಸಂಸ್ಥಾನದವರ ಸೂಚನೆಯಂತೆ ಹೆಸರಿಟ್ಟು ಈಗಾಗಲೆ ಪ್ರಾರಂಭಿಸಿದ
ಪರ್ಯಾಪ್ತಿ ನಿರಂತರ ಅನ್ನದಾಸೋಹ ಯೋಜನೆಗೆ ಹೆಚ್ಚಿನ ಮಹತ್ವ ನೀಡಿ ಹಣವನ್ನು ಆ ವ್ಯವಸ್ಥೆಗೆ ಮೀಸಲಿಡುತ್ತೇವೆ” ಎಂದರು.
“ಕೆಲವೊಂದಿಷ್ಟು ವ್ಯವಸ್ಥೆಗೆ ನಾವು ಕೇವಲ ಬೀಜಾವಾಪನ ಮಾಡಿದ್ದೇವೆ. ಇದಕ್ಕೆ ನೀರು ಗೊಬ್ಬರ ಹಾಕಿ ಬೆಳೆಸುವುದು ನಮ್ಮೆಲ್ಲರ ಕರ್ತವ್ಯ. ಎಂದರು
ಮುಂಬರುವ ದಿನಗಳಲ್ಲಿ ಈ ಕ್ಷೇತ್ರವು ಇನ್ನೂ ಹೆಚ್ವಿನ ಜನಬೆಂಬಲ ಪಡೆದು ಮಹತ್ತರವಾಗಿ ಎದ್ದು ನಿಲ್ಲವುದು ನಿಶ್ಚಿತ.”
ಎಂದು ಹೇಳಿಣ ತಮ್ಮನ್ನು ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿದ್ದಕ್ಕಾಗಿ ಧನ್ಯನಾಗಿದ್ದೇನೆ ಎಂದು ತಮ್ಮ ಅಧ್ಯಕ್ಷೀಯ ನುಡಿಗಳನ್ನು ಆಡಿದರು.
ನಂತರದಲ್ಲಿ ಶ್ರೀ ದೇವಸ್ಥಾನದ ಆಡಳಿತ ಕಮೀಟಿ ದಿವ್ಯಾಷ್ಟಬಂಧ ಮಹೋತ್ಸವ ಸಮಿತಿಯ ಸದಸ್ಯರುಗಳಿಗೆ ಗೌರವ ಸಮ್ಮಾನವನ್ನು ಮಾಡಿದರು.
ಹಾಗೆಯೇ ಸುತ್ತ ಊರಿನ ಕೆಲವು ಸಣ್ಣ ಪುಟ್ಟ ಸಂಘ-ಬಳಗದವರಿಗೆ ನೆನಪಿನ ಕಾಣಿಕೆ ಕೊಟ್ಟು ಗೌರವಿಸಿದರು.
ಗಜಾನನ ಹೆಗಡೆ ಕೊಡ್ತಗಣಿ ಕಾರ್ಯಕ್ರಮ ನಿರೂಪಿಸಿ ಸರ್ವರಿಗೂ ವಂದನೆಗಳನ್ನು ತಿಳಿಸಿದರು.
ಸಭಾಕಾರ್ಯಕ್ರಮದ ನಂತರ ಎಲ್ಲ ಕಾರ್ಯಕರ್ತರಿಗೂ ಭೋಜನದ ವ್ಯವಸ್ಥೆಯನ್ನು ಕಲ್ಪಿಸಲಾಯಿತು.