ಶ್ರೀಕ್ಷೇತ್ರ ಇಟಗಿಯಲ್ಲಿ ಶಿವಪವಿತ್ರಾರೋಪಣ

ಶ್ರೀ ಕ್ಷೇತ್ರದಲ್ಲಿ ಇಂದು ಶಿವ ಪವಿತ್ರಾರೋಪಣ ಅಂಗವಾಗಿ ಶ್ರೀ ರಾಮೇಶ್ವರನಿಗೆ ಧಾರ್ಮಿಕ ವಿಧಿ ವಿಧಾನದಂತೆ ಪವಿತ್ರಾರೋಪಣವನ್ನು ಶ್ರೀ ದೇವಸ್ಥಾನದ ಪ್ರಧಾನ ಅರ್ಚಕರಾದ ಶ್ರೀ ಅನಂತ ಭಟ್ ಮತ್ತು ಶ್ರೀ ರಾಜೇಂದ್ರ ಭಟ್ ಇವರ ನೇತೃತ್ವದಲ್ಲಿ ನೆರವೇರಿಸಲಾಯಿತು. ಈ ಸಂದರ್ಭದಲ್ಲಿ ಆಗಮಿಸಿದ ಭಕ್ತರು ಈ ಪವಿತ್ರ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಪರ್ಯಾಪ್ತಿ ಪ್ರಸಾದ ಭೋಜನ ಸ್ವೀಕರಿಸಿ ಪುನೀತರಾದರು.

ಶಿವಪವಿತ್ರಾರೋಪಣ ಎಂದರೆ : “ದೇವಾಲಯದಲ್ಲಿ ನಡೆಯುವ ಧಾರ್ಮಿಕ ಪೂಜಾ ಕೈಂಕರ್ಯಗಳ ಲೋಪದೋಷಗಳನ್ನು ಪರಿಹರಿಸಿ, ದೇವರ ಸನ್ನಿಧಿಯ ಪಾವಿತ್ರ್ಯವನ್ನು ಪುನಃಸ್ಥಾಪಿಸಿ, ಲೋಕಕಲ್ಯಾಣಕ್ಕಾಗಿ ಶಿವನಿಗೆ ಪವಿತ್ರವನ್ನು ಸಮರ್ಪಿಸುವ ವಿಶೇಷ ಆಗಮಿಕ ವಿಧಿಯೇ ಶಿವ ಪವಿತ್ರಾರೋಪಣ.”

ಅರ್ಥ: ಶಿವ ಪವಿತ್ರಾರೋಪಣವು ಶಿವಾಲಯಗಳಲ್ಲಿ ನಡೆಯುವ ಅತ್ಯಂತ ಪವಿತ್ರವಾದ ಆಗಮಿಕ ಆಚರಣೆ. ಇಲ್ಲಿ “ಪವಿತ್ರ” ಎಂದರೆ ಮಂತ್ರಶಕ್ತಿಯಿಂದ ಶುದ್ಧೀಕರಿಸಲಾದ ಪವಿತ್ರ ಸೂತ್ರ/ದಾರ ಮತ್ತು “ಆರೋಪಣ” ಎಂದರೆ ಅದನ್ನು ಶಿವನಿಗೆ ಸಮರ್ಪಿಸಿ ಧಾರಣೆ ಮಾಡಿಸುವುದು.

ಯಾಕೆ ಆಚರಿಸಲಾಗುತ್ತದೆ: ದೇವಾಲಯದಲ್ಲಿ ಒಂದು ವರ್ಷ ಅಥವಾ ನಿರ್ದಿಷ್ಟ ಅವಧಿಯಲ್ಲಿ ನಡೆದ ನಿತ್ಯಪೂಜೆ, ನೈವೇದ್ಯ, ಅಭಿಷೇಕ, ಉತ್ಸವ ಮತ್ತು ಇತರ ಧಾರ್ಮಿಕ ಕಾರ್ಯಗಳಲ್ಲಿ ಉಂಟಾಗಿರಬಹುದಾದ ತಿಳಿದ-ತಿಳಿಯದ ಲೋಪದೋಷಗಳ ನಿವಾರಣೆ ಹಾಗೂ ಧಾರ್ಮಿಕ ಶುದ್ಧೀಕರಣಕ್ಕಾಗಿ ಈ ವಿಧಿಯನ್ನು ಆಚರಿಸಲಾಗುತ್ತದೆ.

ನಮ್ಮದೇವಸ್ಥಾನದ ಆಚರಣೆ: ಶ್ರೀದೇವಸ್ಥಾನದಲ್ಲಿ ಶ್ರಾವಣ ಶುದ್ಧ ತೃಯೋದಶಿಯಂದು ಪಾರಂಪರಿಕವಾಗಿ ಆಗಮೋಕ್ತ ವಿಧಿ ವಿಧಾನಗಳಮೂಲಕ ಶ್ರೀದೇವಸ್ಥಾನದ ಪ್ರಧಾನ ಅರ್ಚಕರು ಮತ್ತು ತಂತ್ರಿಕರು ನೆಡೆಸಿಕೊಂಡು ಬಂದಿರುವ ಧಾರ್ಮಿಕ ಆಚರಣೆಯಾಗಿದೆ. ಈ ದಿನದಂದು ಹೋಮ ಹವನಾದಿಗಳು ಮತ್ತು ವಿಶೇಷ ನೈವೇದ್ಯ ಸಹಿತ ಪೂಜಾ ಕೈಂಕರ್ಯಗಳು ನೆರವೇರುತ್ತದೆ. ಸಮರ್ಪಿಸಿದ ಪವಿತ್ರ ದಾರಗಳನ್ನು ಶ್ರೀದೇವಸ್ಥಾನದ ತಾಂತ್ರಿಕರು, ಯಜಮಾನರು, ಉಪಾದಿವಂತರು ಮತ್ತು ಚಾಕರಿವಾನರಿಗೆ ನೀಡಲ್ಪಡುತ್ತದೆ. ಇದೊಂದು ವಿಶೇಷವಾದ ಸಂದರ್ಭವಾಗಿದ್ದು ಶ್ರೀದೇವರ ರಕ್ಷೆಯನ್ನು ಧರಿಸುತ್ತಾರೆ. ಇದೊಂದು ಹಿಂದಿನ ಕಾಲದಿಂದಲೂ ನೆಡೆದುಕೊಂಡ ಬಂದಿರುವ ಪದ್ದತಿಯಾಗಿರುತ್ತದೆ. ಈ ದಿನದ ವಿಶೇಷ ಆಚರಣೆಯು ಶ್ರೀದೇವಸ್ಥಾನದ ಭಕ್ತರಿಗೆ ಪವಿತ್ರವಾಗಿದೆ.

Leave a Comment

Your email address will not be published. Required fields are marked *

Scroll to Top