ಸಿದ್ದಾಪುರ; ತಾಲೂಕಿನ ಶ್ರೀಕ್ಷೇತ್ರ ಇಟಗಿಯ ಶ್ರೀ ರಾಮೇಶ್ವರ ದೇವಾಲಯದಲ್ಲಿ ನಡೆದ ಅಷ್ಟಬಂಧ ಮಹೋತ್ಸವ ಸ್ಮರಣ ಸಂಚಿಕೆ “ರಾಮೇಶ್ವರ” ಬಿಡುಗಡೆಯ ಸಮಾರಂಭದ ಸಂದರ್ಭದಲ್ಲಿ ಖ್ಯಾತ ಅರ್ಥಧಾರಿಗಳ ಕೂಡುವಿಕೆಯಲ್ಲಿ ಶನಿವಾರ ನಡೆದ “ರಾಮ ನಿರ್ಯಾಣ” ಯಕ್ಷಗಾನ ತಾಳಮದ್ದಲೆ ತುಂಬಿದ ಸಭಾಂಗಣದಲ್ಲಿಯ ಪ್ರೇಕ್ಷಕರನ್ನು ಮನಸೂರೆಗೊಳ್ಳುವಲ್ಲಿ ಯಶಸ್ವಿಯಾಯಿತು. ರಾಮನಾಗಿ ಖ್ಯಾತ ಅರ್ಥಧಾರಿ ವಾಸುದೇವ ರಂಗಾ ಭಟ್ಟ ಶ್ರೀ ರಾಮಚಂದ್ರನ ಮೇರು ವ್ಯಕ್ತಿತ್ವದ ಚಿತ್ರಣವನ್ನು ತಮ್ಮ ಅರ್ಥಗಾರಿಕೆಯಲ್ಲಿ ಸ್ಪಷ್ಟಪಡಿಸಿದರು. ಪ್ರೊ.ಪವನ ಕಿರಣಕೆರೆ ಲಕ್ಷö್ಮಣನಾಗಿ ಸಹೋದರ ಬಾಂಧವ್ಯವನ್ನು ವಿಷದಪಡಿಸಿದರು. ಕಾಲಪುರುಷನಾಗಿ ಪವನ ಕಿರಣಕೆರೆ ರಾಮನ ಅಂತ್ಯದ ಗಮನಸೆಳೆಯವ ಅನಿವಾರ್ಯದ ಪಾತ್ರವಾಗಿ ಮನೋಜ್ಞವಾಗಿ ಅರ್ಥ ಹೇಳಿದರು. ದೂರ್ವಾಸರಾಗಿ ಗಣೇಶ ಶೆಟ್ಟಿ ಕನ್ನಡಿಕಟ್ಟೆ ಪಾತ್ರದ ಸಿಟ್ಟು, ಅಹಂಕಾರವನ್ನು ದರ್ಶಿಸಿ ಗುಡುಗಿನಂತಹ ಸಂಭಾಷಣೆಯ ಮೂಕ ಪಾತ್ರಕ್ಕೆ ಜೀವ ತುಂಬಿದರು. ನಾಲ್ಕುತಾಸುಗಳ ಕಾಲ ನಡೆದ ತಾಳಮದ್ದಲೆಯುದ್ದಕ್ಕೂ ಪ್ರಸನ್ನ ಭಟ್ಟ ಬಾಳಕಲ್ ಸುಶ್ರಾವ್ಯವಾಗಿ ಸಂಪ್ರದಾಯಬದ್ಧವಾಗಿ ಭಾಗವತಿಕೆ ಮಾಡಿ ಸಮರ್ಥ ಸೂತ್ರಧಾರನೆನಿಸಿದರು. ರಾಘವೇಂದ್ರ ಹೆಗಡೆ ಯಲ್ಲಾಪುರ ಮೃದಂಗದಲ್ಲಿ ಕೈಚಳಕ ತೋರಿದರೆ, ಭಾರ್ಗವ ಹೆಗ್ಗೋಡು ಚಂಡೆಯ ಧ್ವನಿಯನ್ನು ಮಾರ್ದನಿಸಿದರು. ಸಂಪ್ರದಾಯಕ ಚೌಕಟ್ಟು ಮೀರದೇ, ಅನಾವಶ್ಯಕವಾಗಿ ತರ್ಕ ವಿತರ್ಕಕ್ಕೆ ಅವಕಾಶ ನೀಡದೇ, ಪರಸ್ಪರ ಪಾತ್ರಗಳ ಹಿರಿಮೆಯನ್ನು ಗೌರವಿಸುತ್ತಾ, ಸಮಯೋಚಿತ ಹೊಂದಾಣಿಕೆಯ ಮೂಲಕ ಮೂಡಿಬಂದ “ರಾಮ ನಿರ್ಯಾಣ” ತಾಳಮದ್ದಲೆ ಪ್ರೇಕ್ಷಕವರ್ಗವನ್ನು ಅಲುಗಾಡದಂತೆ ಹಿಡಿದಿಟ್ಟುಕೊಳ್ಳುವಲ್ಲಿ, ಬಹುಕಾಲ ಮನದಾಳದಲ್ಲಿ ನೆಲೆನಿಲ್ಲುವಂತೆ ಮಾಡುವಲ್ಲಿ ಯಶಸ್ವಿಯಾಯಿತು.
ವರದಿ: ಕೆಕ್ಕಾರ ನಾಗರಾಜ ಭಟ್ವ, ವರದಿಗಾರು ಸಿದ್ದಾಪುರ , 9880043055

